Monday, July 6, 2009

ನನ್ನ ಕಂದ ಬೃಹತ್ ಬೋಪಯ್ಯ (ಬನ್ಸಿ).......ಬ್ಯಾಕ್ ಗ್ರೌಂಡ್ ಮಾತ್ರ ನೋಡಿದರೆ ಸಾಲದು..........

8 ವರ್ಷದ ಹಿಂದಿನ ಘಟನೆ. ನಾನಾಗ ಕೊಡಗಿನ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನ ಅಂತಿಮ ಬಿ.ಕಾಂ ವಿಧ್ಯಾರ್ಥಿನಿ. ತರಗತಿಗಳು ಸುರುವಾದ ಹೊಸತು. ಆ ವರ್ಷ ಆಡಿಟ್ ವಿಷಯವಿತ್ತು. ಅದನ್ನು ಭೋಧಿಸಲು ಪ್ರೊಫೆಸರ್ ಬೆಳ್ಯಪ್ಪ ಅವರು ತರಗತಿಗೆ ಬಂದಿದ್ದರು. ಅವರು ಸೀರಿಯಸ್ ಆಗಿ ಜೋಕ್ ಮಾಡೋದರಲ್ಲಿ, ಸಂಧರ್ಭಕ್ಕೆ ತಕ್ಕ ಗಾದೆ ಹೇಳೋದರಲ್ಲಿ ನಿಸ್ಸೀಮರು. ಅವ್ರ ಎರಡನೆ ಮಗಳು ನಮ್ಮ ಕ್ಲಾಸ್ ಮೆಟ್.

ನಮ್ಮ ತರಗತಿಯಲ್ಲಿ ಏಳು ಹುಡುಗಿಯರು, 18- 19 ಹುಡುಗರು ಇದ್ರು. ನಾನು, ಪೂನಂ, ಪುಷ್ಪಲತ ಮುಂದಿನ ಬೆಂಚಿನ ಹುಡುಗಿಯರು. ಬೇರೆ ಮಕ್ಕಳು ನಮಗೆ ಗಾಂಧಿಗಳು ಎನ್ನುತ್ತಿದ್ದರು. ನಮ್ಮ ಹಿಂದಿನ ಬೆಂಚಿನಲ್ಲಿ ರೇಣುಕ, ಪ್ರೀತ, ಡಯಾನ, ಶರ್ಲಿ ಕೂರುತಿದ್ದರು.

ಆಡಿಟ್ ಬಗ್ಗೆ ಸರ್ ಪೂರ್ವಭಾಗಿಯಾಗಿ ತಿಳಿಸುತ್ತಾ ವಿವರಿಸುತ್ತಿದ್ದರು. ಲೆಕ್ಕ ಪರಿಶೋಧನೆ ಎಂದರೇನು? ಆ.. ಪರಿಶೀಲನೆಯಲ್ಲಿ ಕುಲಂಕುಶವಾಗಿ, ಮೊದಲೇ ಏನೆಲ್ಲಾ.. ಪರಿಶೀಲಿಸಬೇಕು. ಹೀಗೆ...ಉದಾಹರಣೆ ನೀಡುತ್ತಾ... ಕ್ಲಾಸ್ ಆಸಕ್ತಿದಾಯಕವಾಗಲು

"ಈಗ ಮದುವೆಗೆ ಮುನ್ನ ಹುಡುಗ, ಹುಡುಗಿಯ ಬಗ್ಗೆ ಏನೆಲ್ಲಾ ಪರಿಶೀಲನೆ ಮಾಡುತ್ತಾನೆ? " ಎಂದು ಧೀರ್ಘವಾಗಿ ಅವರ ಕನ್ನಡಕದೊಳಗಿನ ಕಣ್ಣಿನಿಂದ ನಮ್ಮನ್ನೆಲ್ಲ ಪರಿಶೀಲಿಸಿದರು.

"ಸರಿ ಈಗ ಆ ಬಗ್ಗೆ ಒಬ್ಬೊಬ್ಬರಾಗಿ ಅಭಿಪ್ರಾಯ ತಿಳಿಸಿ" ಎಂದರು.

ತರಗತಿಯಲ್ಲಿ ಆಗಲೇ ಗುಸು ಗುಸು ಸುರುವಾಗಿತ್ತು. ಅದನ್ನು ಮುರಿಯುತ್ತಾ... ಸರ್ ಮೊದಲು ಹುಡುಗಿಯರಿಂದ ಸುರುವಾಗಲಿ ಎಂದರು. ಹುಡುಗರೆಲ್ಲ.... " ಲೇಡಿಸ್ ಫಸ್ಟ್" ಎಂದು ಒಕೊರಲಿಂದ ಕೂಗಿದರು.

ನೋಡಪ್ಪಾ.... ಆಗ ನನಗೆ ಸುರುವಾಗಿದ್ದು ಭಯ! ನನಗೆ ಡವ ಡವ ಎನ್ನಲು ಸುರುವಾಯ್ತು.. ಭಯದಿಂದ ನನ್ನ ತಲೆ ಖಾಲಿ ಖಾಲಿ.....ಆ ಬದಿಯಿಂದ ಸುರು ಮಾಡಿದರೆ ಪುಷ್ಪಲತ ಮೊದಲು, ಈ ಬದಿಯಿಂದ ಪ್ರಾರಂಭಿಸಿದರೆ ನಾನು ಮೊದಲು. ಎರಡನೇಯವಳೋ , ಮೂರನೆಯವಳೋ ಆಗಿದ್ದರೆ.... ಸ್ವಲ್ಪ ಧೈರ್ಯ , ಏನಾದರು ಹೊಳೆಯುತ್ತಿತ್ತು.... ಸುಮ್ಮನೆ ತಲೆ ತಗ್ಗಿಸಿ ಕುಳಿತು ಬಿಟ್ಟೆ....

ಅಂತೂ ಕೊನೆಗೆ ಸರ್ ..... ಕೃಪಾ.. ಎಂದು ನನ್ನ ನೋಡಿದರು. ವಿಧಿಯಿಲ್ಲ .....ಅಂಜುತ್ತಾ... ಅಳುಕುತ್ತ.... ಎದ್ದು ನಿಂತೆ. ಇಡೀ.... ತರಗತಿ.... ಇಷ್ಟಗಲ ......ಬಾಯಿ ಮಾಡಿಕೊಂಡು ನಗು ತಡೆ ಹಿಡಿದು ನನ್ನೆಡೆಗೆ ನೋಡುತ್ತಿತ್ತು.. ತರಗತಿಯಲ್ಲಿ ಸೂಜಿ ಬಿದ್ದರು ಕೇಳಿಸದಷ್ಟು ನಿಶಬ್ಧ.... ನನಗೋ ತಲೆಯೆಲ್ಲ...... ಬ್ಲಾಂಕ್!!!! ಏನು ಹೇಳಲಿ.... ಒಂದೂ ಹೊಳೆಯುತ್ತಿಲ್ಲ... ಅಂತೂ ಇದ್ದ ಬದ್ದ ಧೈರ್ಯ ಒಗ್ಗೂಡಿಸಿಕೊಂಡು......

" ಸರ್ ...... ಹುಡುಗಿಯ ಬ್ಯಾಕ್ ಗ್ರೌಂಡ್ ಎಲ್ಲ ನೋಡ ಬೇಕು" ಎಂದೆ. ನನ್ನ ದೃಷ್ಟಿಯಲ್ಲಿ ಬ್ಯಾಕ್ ಗ್ರೌಂಡ್ ಎಂದರೆ... ಹುಡುಗಿಯ ಗುಣ, ನಡತೆ, ವಿಧ್ಯಾಬ್ಯಾಸ .... ಮನೆತನ..... ಹೀಗೆ ಆಗಿತ್ತು. ನನಗೆ ಗೊತ್ತಿದ್ದೂ ಅಷ್ಟೇ. ನನಗೆ ನನ್ನ ಅಭಿಪ್ರಾಯದ ಬಗ್ಗೆ ವಿಶ್ವಾಸ ಇತ್ತು. ನಾನು ಹೇಳಿ ಆದ ಮೇಲೆ ಸರ್ ಕಡೆಗೆ ನೋಡುತ್ತಾ ಇದ್ದೆ. ಇಡೀ ತರಗತಿಯು ನನ್ನ ಅಭಿಪ್ರಾಯಕ್ಕೆ ಸಮ್ಮತಿಸಿದಂತಿತ್ತು. ನನ್ನ ನಂತರ ಮಧ್ಯದಲ್ಲಿ ಕುಳಿತಿದ್ದ ಪೂನಂ ಏಳಲು ಮಿಸುಕಾದುತಿದ್ದಳು. ನಾನು ಸರ್ "ಸಿಟ್" ಎನ್ನದೆ ಕೂರುವಂತಿಲ್ಲ..... ಹಾಗೆ ಹೇಳುವುದನ್ನು ಕಾಯ್ತಾ ಇದ್ದೆ ಕುಳಿತು ಕೊಳ್ಳಲು.

ಸರ್ ಆಗ ಗಂಭೀರ ವದನರಾಗಿ.....ತಮ್ಮ ಗಂಭೀರ ಧ್ವನಿಯಿಂದ ..... ಮುಖದಲ್ಲಿ ಚಿಂತೆ ತುಂಬಿಸಿ ಕೊಂಡ ಹಾಗೆ ಬದಲಿಸಿ "ಬರಿ ಬ್ಯಾಕ್ ಗ್ರೌಂ ಡ್ ಮಾತ್ರ ನೋಡಿದರೆ ಸಾಲದಮ್ಮಾ....... ಫ್ರಂಟ್ ಗ್ರೌಂಡು.... ನೋಡ ಬೇಕು" ಎಂದರು.
ಇಡೀ ತರಗತಿ ಹ್ಹೋ......ಎಂದು ನಗೆಕಡಲಿಂದ ಮುಳುಗಿ ಹೋಯ್ತು. ನಾನು ದೊಪಕ್ ಎಂದು ಕುಳಿತು ಬಿಟ್ಟೆ. ನಾಚಿಕೆ, ಅವಮಾನದಿಂದ ಕುಗ್ಗಿ ಹೋಗಿದ್ದೆ. ಆ... ಘಟನೆ ನೆನೆದರೆ ಈಗಲೂ ಮುಖಕ್ಕೆ ರಕ್ತ ನುಗ್ಗಿದ ಹಾಗಾಗುತ್ತೆ.

Thursday, June 4, 2009

ಬಾಲ್ಯ

ಮತ್ತೆ ಮರುಕಳಿಸುತ್ತಿದೆ....
ಎನ್ನ ಬಾಲ್ಯ, ಮಗನಲ್ಲಿ....

ಅವನ ಆಟ ಪಾಠಗಳಲ್ಲೆಲ್ಲಾ...
ನಾನು ಸಮ ಭಾಗಿ ...

ಪ್ರತಿಸಲ ಗೆಲ್ಲ ಬೇಕೆಂದು .,
ಅವನ ಹಠ . . .

ನನಗೋ., ಕಲಿಸಲಿಷ್ಟ ...
ಸೋಲಿನ ಪಾಠ ...

ಹಳೆ ಪಳೆಯುಳೆಕೆಗಲೆಲ್ಲಾ .,
ಅಂದೆನ್ನ ಆಟಿಕೆಗಳು ...

ಇವನಿಗೋ ಎಲ್ಲವೂ...
ಹೊಚ್ಚ ಹೊಸದು...

ಒಂದೇ ದಿನಕ್ಕೆಲ್ಲಾ ...
ಅವು ಪಳೆಯುಳಿಕೆಗಳು ....

ಕಳೆದು ಕೊಂಡ ನೋವು .,
ಅವನಲ್ಲಿಲ್ಲವೇ ಇಲ್ಲ !!!

ಮತ್ತೆ ಹೊಸದೊಂದರ .,
ನಿರೀಕ್ಷೆಯ ಆನಂದದಲ್ಲಿ ...

ನನಗೋ ಕಳೆದು ಕೊಂಡ .,
ನೋವಿನ್ನೂ ಮಾಸಿಲ್ಲ ಮನದಲ್ಲಿ ...

ಬದುಕಿನ ಪಾಠ .....
ಅವನಿಗೆ ಕಲಿಸಲೇ...?
ಅವನಿಂದ ಕಲಿಯಲೇ...?

Monday, May 4, 2009

ಸವಿ..... ಸವಿ..... ನೆನಪು......ಸಾವಿರ ನೆನಪು..........

ನನ್ನ ಅಮ್ಮನ ಮನೆ....... ದಟ್ಟ ಕಾಡಿನ ಒಳಗೆ......... 3 ಮೈಲು ನಡೆದು.....ಶಾಲೆಗೆ ಬರಬೇಕಿತ್ತು...ಅದೆಷ್ಟೋ ದೂರ ಒಂದು ಕಡೆ ಕಾಡು....ಒಂದು ಕಡೆ ಕಾಫಿ ತೋಟ..... ಆಮೇಲೆ...... ಎರಡೂ ಬದಿಯೂ ತೋಟ , ಬಸ್ಸು ಏನೂ ಇರಲಿಲ್ಲ....... ಎಲ್ಲೋ ವಾಹನಗಳು ಅಪರೂಪಕ್ಕೆ ಓಡಾಡಿದರೆ ಆಯಿತು ಇಲ್ಲಾಂದ್ರೆ ಇಲ್ಲ..... ಆಗ ನಮ್ಮೂರಲ್ಲಿ ಆಟೋನೆ ಇರಲಿಲ್ಲ.......

ಹೀಗಿರುವಾಗ ನಾವು ಆ ದಾರಿಯಲ್ಲೇ ನಡೆದೇ ......ಶಾಲೆ ಕಾಲೇಜು ಮುಗಿಸಿದೆವು...... ಆಗೆಲ್ಲ.... ನನಗೆ... ನನ್ನ ಜೀವದ ಬಗ್ಗೆ ನನಗೆ ನಂಬಿಕೆ ಇರಲಿಲ್ಲ.... ಆನೆಗಳು ಓಡಾಡುವ ದಾರಿ....... ನಿರ್ಜನ ಪ್ರದೇಶ...... ಅಬ್ಬಾ ಈಗ ನೆನೆಸಿದರೆ....ಎದೆ ಜಿಲ್ಲೆನೆಸುತ್ತೆ...!!!

ಅಕ್ಕ ಪಕ್ಕ ನನ್ನ ತಂದೆಯ ಅಣ್ಣಂದಿರ ಮೂರು ಮನೆ ಇತ್ತು.... ಇವರಲ್ಲಿ ಎರಡು ಮನೆಯವರು ಮಾತ್ರ ನಮ್ಮೊಡನೆ ಶಾಲಾ-ಕಾಲೇಜು ಮುಗಿಸಿದವರು. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ........... ಕ್ಲಾಸ್ ಬೇರೆ ಬೇರೆ ಆಗಿ ಬರುವಾಗ ಒಬ್ಬೊಬ್ಬರೇ ಆಗಿ ಬಿಡುತ್ತಿದ್ದೆವು........ನಮಗೆ .... ಮಾರ್ಚ್ - ಏಪ್ರಿಲ್ ಬಿಟ್ಟರೆ.... ವರ್ಷ ಪೂರ್ತಿ ಮಳೆಗಾಲ....... ಒದ್ದೆ ಲಂಗದಲ್ಲಿ.... ತಲೆ ಮೇಲೆ ನೆಪ ಮಾತ್ರಕ್ಕೆ ಕೊಡೆ ಇಟ್ಟು ಕೊಂಡು ಹೊಳೆ ಆದ ದಾರಿಯಲ್ಲಿ ಕಾಲಿನಲ್ಲಿ ನೀರು ಚಿಮ್ಮಿಸುತ್ತಾ ನಡೆದು ಬರುತಿದ್ದರೆ.... ಸ್ವರ್ಗಕ್ಕೆ ಮೂರೇ ಗೇಣು ನಿಜಕ್ಕೂ .... ಈ ಎಲ್ಲ ಸಂತೋಷಕ್ಕೆ ಭಾಗಿ ಆದವಳು ನನ್ನ ದೊಡ್ಡಪ್ಪನ ಮಗಳು ವಾಣಿ…….


ನನ್ನ ದೊಡ್ಡಪ್ಪನ ಮಗಳು ವಾಣಿ ನನ್ನ ಓರಗೆಯವಳು......... ಒಂದು ವರ್ಷ ಕ್ಲಾಸಿನಲ್ಲಿ ಮುಂದೆ ಇದ್ದಳು .... ಅಷ್ಟೇ.... ನನ್ನ ಕಾಲೇಜು ಮುಗಿದ ನಂತರ 2 ವರ್ಷ ಬೆಂಗಳೂರಿನ ಒಂದು ಚಾರ್ಟೆಡ್ ಅಕೌ೦ಟೆಡ್ಆಫಿಸ್ ನಲ್ಲಿ ಉದ್ಯೋಗದಲ್ಲಿದ್ದೆ...ಅವಳೂ... ಬೆಂಗಳೂರಿನಲ್ಲೇ....ಉದ್ಯೋಗ ಮಾಡುತ್ತಿದ್ದರೂ ಇಬ್ಬರು ಪರಸ್ಪರ ಒಮ್ಮೆಯೂ ಭೇಟಿ ಮಾಡಿರಲಿಲ್ಲ.... ಆದರೆ... ನನಗೆ ಮದುವೆ ಗೊತ್ತಾದಾಗ ಓಡೋಡಿ ಬಂದಿದ್ದಳು ನನ್ನ ಇಂದಿರಾ ನಗರದ ಹಾಸ್ಟೆಲ್ಗೆ ....... ಒಂದು ಚೀಟಿಯೊಡನೆ........ ಅದನ್ನು ಈಗ ನಿಮಗಾಗಿ ನಿಮ್ಮ ಮುಂದೆ ಬಿಚ್ಚಿಡುತಿದ್ದೇನೆ................... ಏಪ್ರಿಲ್ 24 ಕ್ಕೆ ನಮ್ಮ ಮದುವೆ ಆಗಿ 4 ವರ್ಷ.... ಆ ಸವಿ ನೆನಪಲ್ಲಿ....ಓದಿ ಅಭಿಪ್ರಾಯಿಸುತ್ತೀರಲ್ಲ....

ವಸಂತ ಕಾಲ ಬಂದಾಗ.................

ನಿನ್ನೆ ಮೊನ್ನೆಯಂತಿದೆ, ಆ ದಿನಗಳು,
ಅಲ್ಲಲ್ಲ ಆ ಎರಡು ದಶಕಗಳು....
ಚಪ್ಪಲಿ ಹಾಕದ, ನೆನೆದ ಲಂಗದ...
ಹುಡುಗರು.... ನಾವಿನ್ನು ಶಾಲೆಯತ್ತ....
ನಡೆಯುತ್ತಿದ್ದ... ಆ ಅಭದ್ರ ಕಾಲವದು...

ಮಳೆ ಸುರಿಯುತ್ತಲಿರುತ್ತದೆ.....
ಅಗಾಗ ತನ್ನ ಕರ್ತವ್ಯವೆಂಬಂತೆ...
ಮಾವು ಚಿಗುರುಗಳು ಕೂಡ.....
ತಾನೇನು ಕಡಿಮೆ ಎನ್ನುತ್ತವೆ....
ಬಾಗಿದ ತೆನೆ ಎದೆಯುಬ್ಬಿಸಿ......ಸವಾಲೋಡ್ಡುತ್ತಾ...
ಈ ಕಾಲಚಕ್ರ ಸಾಗಿದೆ.... ಸಾಗುತಲಿದೆ...

ಎನಗೆ ಮತ್ತೆ ನೆನಪಾಗುತಿದೆ...
ಆ ದಿನಗಳು....ಹುಡುಕುತ್ತೇನೆ...
ಸುರಿವ ಮಳೆಯಲಿ... ಚಿಗುರು ಮಾವಲಿ.....
ತಲೆಬಾಗಿದ ತೆನೆಯಲಿ......

ಊಹೂಂ ತಲೆಯಾದಿಸುತ್ತವೆ ಅವು.,
ಮತ್ತೆ ಬಾರವೂ.. ಆ ದಿನಗಳು....
ವರ್ತಮಾನದಲ್ಲಿ ಭೂತವರಸ ಬೇಡ
ವ್ಯರ್ಥ ಮಾನವ... ನಡೆ ಮುಂದೇ ನೀ....

ಚಕ್ರವದೇ ತಿರುಗಲಿದೆ... ನಾವು.,
ಬಂದಾಗೆಲ್ಲ... ಕಪ್ಪು ಕಾಫಿ...
ಭೀಡೆ.. ನಗು, ಊಟ ಹೊಟ್ಟೆಗೆ....
ಇರಲಿರಲಿ.... ನಾವಿದ್ದೇವೆ...ಒಡ್ಡೋಲಗದ
ನಿರೇಕ್ಷೆಯಲಿ....ತಯಾರಗುತ್ತಿರುವೆ.....ತಾನೇ....
ನೀ ನಸು ನಾಚಿಕೆಯಲಿ......?
ಯಾಕೊ ಏನೋ...... ನನ್ನ ಬ್ಲಾಗ್ ಗೆ ಬಂದ ಕಾಮೆಂಟ್ ಗೆ ಉತ್ತರಿಸಲೇ ಆಗ್ತ ಇಲ್ಲ.......ಅದಕ್ಕೆ.......ಇಲ್ಲಿ ಬರಿತಾ ಇದ್ದೀನಿ........

ಧನ್ಯವಾದಗಳು ಮಲ್ಲಿಯಣ್ಣ........ಮೆರೆತ್ತರಕ್ಕೆ ಬೆಳದರೂ ನನ್ನಂತಹ ಪುಟ್ಟ ಗರಿಕೆ ಗಿಡವನ್ನು ಪ್ರೋತ್ಶಾಹಿಸುತ್ತೆರಲ್ಲ.....ಥ್ಯಾಂಕ್ಯು ವೆರಿ ಮಚ್ ......

***************************************************

ನಮಸ್ತೆ... ಮನಸ್ಸು...."ಹೀಗೆ ಬರೆಯುತಿರಿ......" ಇಂತಹ ಮಾತುಗಳೇ ಬರೆಯದವರನ್ನು ಬರೆಸುವುದು.....ಧನ್ಯವಾದಗಳು........
*****************************************************

ನಿಜ ಧರಿತ್ರಿ......ಅಮ್ಮನ ಬಗ್ಗೆ....ಎಷ್ಟು ಹೇಳಿದ್ರು ಕಡಿಮೇನೆ.......ಈಗಲೂ ಒಮ್ಮೊಮ್ಮೆ ಅಮ್ಮನ ಹತ್ರ ಜಗಳ ಮಾಡ್ತೀನಿ....ಆದ್ರೆ....ಒಬ್ಬಳೇ ಇರುವಾಗ...... ಭಯ ಆಗುತ್ತೆ.....ಅಮ್ಮನ ಆದಷ್ಟು....ಖುಷಿಲಿ ಇರುವಂತೆ.....ನೋಡ್ಕೋ ಬೇಕು ಇಲ್ಲಾಂದ್ರೆ......ಆ..... ಕೊರಗನ್ನು...ಹೇಗೆ ಮಾಡಿದ್ರು ಹೊಗಿಸೋಕ್ಕೆ ಆಗೋಲ್ಲ ಅಂತನಿಸುತ್ತೆ....

Thursday, April 30, 2009

ಅಮ್ಮ

ನನ್ನ ಅಮ್ಮ

ನನ್ನ ಅಮ್ಮನೂ ಸುಂದರಿ......
ತೊಳೆದ ಮುತ್ತಿನ ಲಹರಿ
ಒಂದು ಕಾಲದಲ್ಲಿ...!!!

ಮುದ್ದುಕ್ಕುವ ಹಾಲ್ಗೆನ್ನೆ
ಮುಗ್ದತೆ ಸೂಸುವ ಚಿಹ್ನೆ
ಹಳೆ ಭಾವ ಚಿತ್ರದಲ್ಲಿ...!!!

ನನ್ನಮ್ಮ ಒಲವಿನಿಂದ ....
ಕನಸುಗಳ ಲೋಕದಿಂದ
ಧುಮುಕ್ಕಿದ್ದು ಸಂಸಾರ ಕೂಪದಲ್ಲಿ..!!!

ಕಟ್ಟಿದ ಕನಸುಗಳ ಬುತ್ತಿ
ಒತ್ತೊಟ್ಟಿಗಿಟ್ಟು... ಟೊಂಕಕಟ್ಟಿ
ನಿಂತಿದ್ದು ಸಂಸಾರ ದಾಳದಲ್ಲಿ..!!!

ಕಷ್ಟ ಕೋಟಲೆಗಳ ಜಂಜಾಟದಲ್ಲಿ
ನೊಂದು, ನಲುಗಿ ಬಾಳಿನಲ್ಲಿ
ಈಗ ಒಣ ಹೂವಿನ ಮಲ್ಲಿ..!!!

ನೆರಿ ಬಿದ್ದ ಹಣೆ.. ಮರೆಯಾದ ಯೌವ್ವನ,
ಗುಳಿಬಿದ್ದ ಕಣ್ಣು, ಸುಣ್ಣದ ಮೈಮನ
ಬದಲಾದ ಉರುಳು ಚಕ್ರದಲ್ಲಿ !!!

ಜನನ

ತಾಯಿಯ ಗರ್ಭದಲ್ಲಿ...
ಮಗು ಪ್ರಥಮವಾಗಿ ಚಲಿಸಿದಂತೆ...
ಅತ್ತ-ಇತ್ತ ತೊನೆದಾಡಿ ಗುದ್ದಿದಂತೆ...
ನನ್ನಾಳದಲೀ ನಲಿಯುತ್ತಿತ್ತೊಂದು ಭಾವ;

ಕೊನೆಗೂ, ಹೃದಯ ಗರ್ಭದಲ್ಲಿ
ಕೊನರಿತೊಂದು ಪುಟ್ಟ ಕವಿತೆ
ಮಾತೆಯ ಮಮತೆಯೊಡಲಲ್ಲಿ
ಕುಡಿಯೊಂದು ಪಲ್ಲವಿಸಿದಂತೆ...

ವೈದ್ಯೆ ನೀಡಿದಳು ಸಲಹೆ
ಗೆಳತಿ ಹತ್ತು ಹಲವು ರೀತಿಯಲಿ
ಕರುಳ ಕುಡಿಯ ಭವಿಷ್ಯಕ್ಕೆ
ಬಾಳಿ ಬೆಳಗಲು ಮುಂದಕ್ಕೆ ....

ಕಣ್ಣು ತೆರೆಯುವ ಮೊದಲೇ
ಜಗಕ್ಕೆ ಬರುವ ಮುಂಚೆಯೇ
ಸಕಲ ರಾಸಾಯನಿಕಗಳ ಪಾನ
ಕೇಳಿಸಲಿಲ್ಲೆನಗೆ ಎಳೆಕಂದನ ರೋದನ ...

ಅಂತೂ ಕೊನೆಗೊಂದು ದಿನ
ರೂಪ ತಾಳಿತೊಂದು ಕವನ
ನವ ಶಿಶುವಿನ ಜನನ
ಅಯ್ಯೋ ಮಗು ಅಂಗಹೀನ ...!

ಬೆಳೆಯಬಿಟ್ಟಿದ್ದಾರೆ ಸ್ವೆಚೆಯಲಿ
ಇರುತ್ತಿತ್ತೆನೋ ಶಿಶು ಆರೋಗ್ಯದಲ್ಲಿ
ಹರಿಯ ಬಿಟ್ಟಿದ್ದರೆ ಸ್ವಂತ ಲಹರಿಯಲಿ...
ಮೂಡುತ್ತಿತ್ತೇನೋ ಕವನ ಅಂದದಲೀ......

Followers

About Me

My photo
ನನ್ನ ಬಗ್ಗೆ ಹೇಳಿಕೊಳ್ಳಲು ಏನು ಇಲ್ಲ ....... ನನ್ನೂರು ಕೊಡಗು...... ಹುಟ್ಟಿದ್ದು, ಬೆಳೆದದ್ದು...... ಸೇರಿದ್ದು......ಎಲ್ಲ ಇಲ್ಲಿಯೇ........ ಇನ್ನೇನು ಹೇಳಲಿ ............ ಇನ್ನು ನೀವೇ ಹೇಳ ಬೇಕು.......